ಭಾಷೆ:-
ಒಂದು ಸಮಾಜದ ವ್ಯಕ್ತಿಗಳು ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಸ್ವತಂತ್ರ ಧ್ವನಿಸಂಕೇತಗಳ ವ್ಯವಸ್ಥೆ ಭಾಷೆ. (ಲಾಂಗ್ವೇಜ್). ಯಾದೃಚ್ಛಿಕ ಮೌಖಿಕ ಧ್ವನಿಸಂಕೇತಗಳ ವ್ಯವಸ್ಥೆಯಿಂದ ಕೂಡಿ ಒಂದು ಸಾಮಾಜಿಕ ಸಮೂಹದ ಸಹಕಾರಕ್ಕೆ ಕಾರಣವಾಗುವುದೇ ಭಾಷೆ ಎಂದು ಬ್ಲಾಕ್ ಮತ್ತು ಟ್ರೇಗರ್ ಹೇಳಿದ್ದಾರೆ. ಭಾಷೆ ಒಂದು ವ್ಯವಸ್ಥೆ; ಸಂಕೇತಗಳ ವ್ಯವಸ್ಥೆ; ಉಚ್ಚರಿತ ಸಂಕೇತಗಳ ವ್ಯವಸ್ಥೆ; ಯಾದೃಚ್ಛಿಕ ಉಚ್ಚರಿತ ಸಂಕೇತಗಳ ವ್ಯವಸ್ಥೆಯೇ ಭಾಷೆ ಎಂದು ತಿಳಿದುಬರುತ್ತದೆ. ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂಕೇತಗಳ ಒಂದು ಸುವ್ಯವಸ್ಥೆಯೇ ಭಾಷೆ ಎಂದು ಡಿ. ಸಸೂರ್ ಹೇಳಿದ್ದಾನೆ. ಶಬ್ದಗಳೆಂಬ ನಾಣ್ಯಗಳ ಮೂಲಕ ಮಾತ್ರ ನಾವು ನಮ್ಮೊಳಗೇ ಆಲೋಚನೆಗಳ ವಿನಿಮಯ ಮಾಡಿಕೊಳ್ಳಲು ಸಾಧ್ಯ ಎಂಬುದಾಗಿ ಕ್ವಿಲರ್ ಕೌಂಚ್ ಅಭಿಪ್ರಾಯಪಟ್ಟಿದ್ದಾನೆ.

	ಭಾಷೆಯ ಉಗಮವನ್ನು ಅರಿಯಲು ಅನೇಕ ವಿದ್ವಾಂಸರು ಪ್ರಯತ್ನ ನಡೆಸಿರುವರಾದರೂ ಅವರ ಯಾವ ಪ್ರಯತ್ನವೂ ಫಲಕಾರಿಯಾಗಿಲ್ಲ. ಭಾಷೆಯ ಉಗಮಕ್ಕೆ ಸಂಬಂಧಿಸಿದ ಅನುಕರಣವಾದ, ಉದ್ಗಾರವಾದ, ಅನುರಣನವಾದ. ಯೊ-ಹೇ-ಹೋವಾದ ಮುಂತಾದವು ತಮ್ಮ ಅಸ್ಪಷ್ಟತೆಯಿಂದಾಗಿ ಬಿದ್ದುಹೋದವು. ಇವೇ ಅಲ್ಲದೆ ಸಂಜ್ಞಾಭಾಷೆಯೇ ಪ್ರಾಚೀನವಾದುದು ಎಂಬುದಾಗಿ ಪ್ರತಿಪಾದಿಸಿದ ಅನೇಕ ಮಹನೀಯರ ವಾದವೂ ಅಸ್ತಿತ್ಟವನ್ನು ಕಳೆದುಕೊಂಡವು. ಆದ್ದರಿಂದ ಭಾಷೆಯ ಹುಟ್ಟನ್ನು ತಿಳಿಯಲು ನಡೆಸಿರುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂದು ಸಪೀರ್ ಹೇಳಿದ್ದಾನೆ.

	ಭಾಷೆ ಮರುಭೂಮಿಯ ಮಹತ್ಕøತಿ. ಮೃಗಕ್ಕೂ ಮಾನವನಿಗೂ ಇರುವ ವ್ಯತ್ಯಾಸಗಳಲ್ಲಿ ಭಾಷೆಯೇ ಪ್ರಮುಖವಾದುದು. ಭಾಷೆ ಸಂಸ್ಕøತಿಯ ಸಾಧನ ಸಾಮಗ್ರಿ. ಭಾಷೆಯಿಂದಲೇ ಮಾನವ ಸಮಾಜ ಸಂಸ್ಕøತಿ ಅರಳಿ ವಿಕಾಸಗೊಂಡಿದೆ. ನಮ್ಮ ಪರಸ್ಪರ ವ್ಯವಹಾರಕ್ಕೆ ಭಾಷೆ ಪ್ರಮುಖ ಸಾಧನ. ಮಾನವ ಮನಸ್ಸನ್ನು ಅರಳಿಸುವ, ಮುದುಡಿಸುವ ಕ್ರಿಯಾಶೀಲವಾಗುವಂತೆ ಮಾಡುವ ಶಕ್ತಿ ಭಾಷೆಗುಂಟು. ಆದ್ದರಿಂದ ಇಂದಿನ ನಾಗರಿಕ ಬದುಕಿನಲ್ಲಿ ಭಾಷೆ ಅಗತ್ಯವೂ ಅನಿವಾರ್ಯವೂ ಆಗಿದೆ.
(ಕೆ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ